ಕಳುಚುರಿ ನಾಣ್ಯಗಳು

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

 ಕಳಚುರಿ ವಂಶದ ಎಲ್ಲ ಶಾಖೆಗಳ ಎಲ್ಲ ರಾಜರ ನಾಣ್ಯಗಳೂ ದೊರಕದಿರುವುದರಿಂದ ಅವರ ನಾಣ್ಯಗಳ ವಿಷಯದಲ್ಲಿ ಸಮಗ್ರವಾದ ಅಭಿಪ್ರಾಯ ಕೊಡುವುದು ಸಾಧ್ಯವಿಲ್ಲ.

ಮಾಹಿಷ್ಮತೀ ಕಳಚುರಿ ಕೃಷ್ಣರಾಜನ ನಾಣ್ಯಗಳು ನಾಸಿಕ್ ಜಿಲ್ಲೆಯ ದೇವಲಾನಾದಲ್ಲಿ ದೊರೆತಿವೆ. ಈ ನಾಣ್ಯಗಳ ವಿಷಯದಲ್ಲಿ ಸಾಕಷ್ಟು ಚರ್ಚೆ ನಡೆದ ಅನಂತರ ಇವು ಕಳಚುರಿ ಕೃಷ್ಣರಾಜನವೆಂದು ತೀರ್ಮಾನಿಸಲಾಗಿದೆ.  ಇವು ಕ್ಷತ್ರಪ, ಗುಪ್ತ ಮತ್ತು ತ್ರೈಕೂಟರ ನಾಣ್ಯಗಳನ್ನು ಹೋಲುತ್ತವೆ.  ಬೆಳ್ಳಿಯ ನಾಣ್ಯಗಳಲ್ಲಿ ಒಂದು ಕಡೆ ರಾಜನ ಚಿತ್ರವೂ ಹಿಂಭಾಗದಲ್ಲಿ ಪರಮಮಾಹೇಶ್ವರ ಮಾತಾಪಿತೃಪಾದಾನುದ್ಯಾತ ಶ್ರೀಕೃಷ್ಣರಾಜ ಎಂಬ ಬರಹವೂ ಉಂಟು. ಪರಮಮಾಹೇಶ್ವರ ಎಂದು ಹೇಳಿಕೊಂಡಿರುವುದು ಗಮನಾರ್ಹ.

 ತ್ರಿಪುರಿಯ ಕಳಚುರಿ ನಾಣ್ಯಗಳಲ್ಲಿ ಗಾಂಗೇಯದೇವನ ನಾಣ್ಯಗಳು ಮುಖ್ಯವಾದವು. ಇವು ಚಿನ್ನ, ಬೆಳ್ಳಿ ಮತ್ತು ತಾಮ್ರಗಳವು.  ಚಿನ್ನದ ನಾಣ್ಯಗಳಲ್ಲಿ ಅರ್ಧ ಟಂಕ, ಕಾಲು ಮತ್ತು ಒಂದನೆಯ ಎಂಟು ಟಂಕದ ಮೌಲ್ಯಗಳ ನಾಣ್ಯಗಳು ದೊರಕಿವೆ. ಗುಂಡಗೆ, ಅರ್ಧ ಅಂಗುಲ ವ್ಯಾಸವುಳ್ಳ ಈ ನಾಣ್ಯಗಳಲ್ಲಿ ಒಂದು ಕಡೆ ನಾಗರೀ ಲಿಪಿಯಲ್ಲಿ ಇವನ ಹೆಸರೂ ಮತ್ತೊಂದು ಕಡೆ ಒಂದು ವೃತ್ತದೊಳಗೆ ಪದ್ಮಾಸನಸ್ಥಳಾದ ಲಕ್ಷ್ಮಿಯ ಚಿತ್ರವೂ ಉಂಟು.  ಲಕ್ಷ್ಮಿಯ ಮೇಲಿನ ಕೈಗಳಲ್ಲಿ ಕಮಲಗಳಿವೆ.  ಈ ರೀತಿಯ ನಾಣ್ಯಗಳು ಇವನ ಅನಂತರ ಉತ್ತರಭಾರತದಲ್ಲಿ ಬಹಳ ಚಲಾವಣೆಗೆ ಬಂದುವು. ಅನೇಕ ರಾಜರು ಇದನ್ನೇ ಅನುಕರಿಸಿದರು.

 ರತ್ನಪುರದ ಕಳಚುರಿ ನಾಣ್ಯಗಳಲ್ಲಿ ಜಾಜಲ್ಲದೇವ, ರತ್ನದೇವ ಮತ್ತು ಪೃಥ್ವೀದೇವರ ನಾಣ್ಯಗಳು ದೊರಕಿವೆ. ಈ ವಂಶದಲ್ಲಿ ಆ ಹೆಸರುಗಳ ರಾಜರು ಅನೇಕರಿದ್ದುದರಿಂದ ಈ ನಾಣ್ಯಗಳನ್ನು ಅಚ್ಚುಹಾಕಿಸಿದವರು ಯಾರು ಎಂದು ಖಚಿತವಾಗಿ ತಿಳಿಯುವುದು ಸಾಧ್ಯವಾಗಿಲ್ಲ.  ಆದರೆ ಈ ನಾಣ್ಯಗಳನ್ನು ಅಚ್ಚು ಹಾಕಿಸಿದವರು 1ನೆಯ ಜಾಜಲ್ಲದೇವ (1090-1120), 2ನೆಯ ರತ್ನದೇವ (1120-1135) ಮತ್ತು 2 ನೆಯ ಪೃಥ್ವೀದೇವ (1135-1165) ಎಂದು ಖ್ಯಾತ ವಿದ್ವಾಂಸ ಮಿರಾಷಿ ಅನೇಕ ಚಾರಿತ್ರಿಕ ಆಧಾರಗಳ ಮೇಲೆ ತೀರ್ಮಾನಿಸಿದ್ದಾರೆ.

 ಜಾಜಲ್ಲದೇವನ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳು ದೊರಕಿವೆ. ಅವುಗಳಲ್ಲಿ ಒಂದು ಕಡೆ 'ಶ್ರೀಮಜ್ಜಾಜಲ್ಲದೇವ' ಎಂಬ ನಾಗರೀ ಲಿಪಿಯ ಬರವಣಿಗೆಯಿದೆ.  ಕೆಲವು ನಾಣ್ಯಗಳ ಹಿಂಭಾಗದಲ್ಲಿ ಎರಡು ಭುಜಗಳ ಹನುಮಂತ ರಾಕ್ಷಸನನ್ನು ಕೊಲ್ಲುತ್ತಿರುವ ಚಿತ್ರವೂ ಮತ್ತೆ ಕೆಲವದರಲ್ಲಿ ಸಿಂಹವೊಂದು ಆನೆಯನ್ನು ತುಳಿಯುತ್ತಿರುವ ಚಿತ್ರವೂ ಉಂಟು.  ರತ್ನದೇವನವಾಗಿ ಈವರೆವಿಗೆ ದೊರಕಿರುವ ಚಿನ್ನ ಮತ್ತು ತಾಮ್ರ ನಾಣ್ಯಗಳಲ್ಲಿ ಒಂದು ಕಡೆ ಶ್ರೀಮದ್ರತ್ನದೇವ ಎಂಬ ನಾಗರೀಲಿಪಿಯ ಶಾಸನ ಮತ್ತೊಂದು ಕಡೆ ಮೇಲೆ ಹೇಳಿದ ಸಿಂಹ ಇಲ್ಲವೇ ಖಡ್ಗದ ಚಿತ್ರ ಇವೆ. ಪೃಥ್ವೀದೇವನ ಚಿನ್ನ, ಬೆಳ್ಳಿ ಮತ್ತು ತಾಮ್ರ ನಾಣ್ಯಗಳಲ್ಲಿ ಶ್ರೀಮತ್ ಪೃಥ್ವೀದೇವ ಎಂಬ ಶಾಸನವೂ, ಕೆಲವಲ್ಲಿ ಸಿಂಹದ ಚಿತ್ರವೂ ಮತ್ತೆ ಕೆಲವಲ್ಲಿ ನಾಲ್ಕು ಭುಜದ ಹನುಮಾನ್ ಚಿತ್ರವೂ ಉಂಟು. ಈ ವಂಶದ ಪ್ರತಾಪಮಲ್ಲನ ತಾಮ್ರದ ನಾಣ್ಯಗಳಲ್ಲಿ ಅವನ ಹೆಸರು ಮತ್ತು ಸಿಂಹದ ಚಿತ್ರ ಇವೆ. ಸರಯೂಪಾರದ ಮತ್ತು ರಾಯಪುರದ ಕಳಚುರಿಗಳ ನಾಣ್ಯಗಳು ದೊರಕಿಲ್ಲ. ಇವಲ್ಲದೆ, ಅವರ ಶಾಸನಗಳಲ್ಲಿ ಟಂಕ, ದ್ರಮ್ಮ, ಅಸು, ಪೌರ, ಕಾಕಿಣೀ, ಪಣ, ಕಪರ್ದ ಮುಂತಾದ ನಾಣ್ಯಗಳ ಉಲ್ಲೇಖಗಳುಂಟು. ಆದರೆ ಇವುಗಳ ಸ್ವರೂಪವೇನೆಂಬುದು ತಿಳಿಯದು.

ಕಲ್ಯಾಣದ ಕಳಚುರಿಗಳ ನಾಣ್ಯಗಳು ಅಷ್ಟಾಗಿ ಬೆಳಕಿಗೆ ಬಂದಿಲ್ಲ. ರಾಯಮುರಾರಿ ಸೋವಿದೇವನ ಶಾಸನವುಳ್ಳ ಚಿನ್ನ ಮತ್ತು ತಾಮ್ರದ ನಾಣ್ಯಗಳು ಮಾತ್ರ ದೊರಕಿವೆ. ಇವುಗಳಲ್ಲಿ ವೃಷಭವೂ ಹಿಂಭಾಗದಲ್ಲಿ ಲತೆಗಳೂ ಕಾಣುತ್ತವೆ.

         

 (ಎ.ವಿ.ಎನ್.)